top of page

ಅಧ್ಯಕ್ಷರ ಸಂದೇಶ

SRN 2.png

ಸಹಕಾರ ತತ್ವದಡಿ ನಾಡಿನ ಸರ್ವಾಂಗೀಣ ಅಭಿವೃದ್ದಿಯು ನಮ್ಮ ಧ್ಯೇಯಮಂತ್ರವಾಗಲಿ

ಭಾರತ ಭಾವನೆಗಳೊಂದಿಗೆ ಬದುಕುತ್ತಿರುವ ರಾಷ್ಟ್ರ. ಪರಸ್ಪರ ಸ್ನೇಹ, ನಂಬಿಕೆ, ವಿಶ್ವಾಸ ಹಾಗೂ ಸಹಕಾರವೇ ಈ ಮಣ್ಣಿನ ಜೀವಾಳ. ಸಹಕಾರ ತತ್ವದ ಪರಿಪೂರ್ಣ ಅಳವಡಿಕೆಯು ಸಮಾಜ ಅಭಿವೃದ್ಧಿಯ ಮೂಲಮಂತ್ರವಾಗಿದೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಕೃಷಿ ಉದ್ಯಮದ ಮಹಾಕ್ರಾಂತಿಗೆ ಮುನ್ನುಡಿ ಬರೆದ ಧೀಮಂತ ನಾಯಕರಾದ ಶ್ರೀ ಮುರುಗೇಶ ಆರ್. ನಿರಾಣಿಯವರ ದೂರದರ್ಶಿತ್ವದ ಮಾರ್ಗದರ್ಶನದಲ್ಲಿ ಜಮಖಂಡಿ ನಗರದಲ್ಲಿ ವಿಶಾಲ (ಎಂ.ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘವು ಕಳೆದ 5 ವರ್ಷಗಳ ಹಿಂದೆ ಜನ್ಮ ತಾಳಿದೆ. ವಿಶೇಷವಾಗಿ ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನತೆಯೇ ಸಹಕಾರಿಯ ಸದಸ್ಯರಾಗಿದ್ದು, ಅವರ ಆರ್ಥಿಕ ವಿಕಾಸದ ಬಲವರ್ಧನೆಗೆ ನಮ್ಮ ಸಹಕಾರಿ ಸಂಘವು ಬದ್ಧವಾಗಿದೆ.

ಸಹಕಾರಿಯ ಸದಸ್ಯರಿಗೆ ಮೌಲ್ಯಾಧಾರಿತ ಹಣಕಾಸಿನ ವ್ಯವಹಾರಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವ ಜೊತೆಗೆ ದೀರ್ಘಕಾಲಿನ ಆರ್ಥಿಕ ಬಲಿಷ್ಠತೆ ಮತ್ತು ಸುರಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಈ ದೆಸೆಯಲ್ಲಿ ಹಣಕಾಸಿನ ವ್ಯವಹಾರದ ಸುರಕ್ಷತೆ ಹಾಗೂ ಗ್ರಾಹಕರಿಗೆ ವಿಶ್ವಾಸರ್ಹತೆ, ನಿಖರ ಹಾಗೂ ಪಾರದರ್ಶಕ ಸೇವೆ ನೀಡಲು ಆನಲೈನ್ ಕೋರ್ ಬ್ಯಾಂಕಿಂಗ್, ರಿಯಲ್ ಟೈಮ್ ನಗದು ವರ್ಗಾವಣೆಗಾಗಿ ಆರ್.ಟಿ.ಜಿ.ಎಸ್. ಹಾಗೂ ಎನ್.ಇ.ಎಫ್.ಟಿ. ಸೇವೆ, ಕ್ಯಾಶಲೆಸ್ ವ್ಯವಹಾರಕ್ಕೆ ಪ್ರಾಶಸ್ತ್ಯ ನೀಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಗ್ರಾಹಕರೊಡನೆ ಉತ್ತಮ ಸಂವಹನಕ್ಕಾಗಿ ನುರಿತ ಹಾಗೂ ಉತ್ಸಾಹಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ವೃತ್ತಿಪರ ಬ್ಯಾಂಕಿಂಗ್ ನಿರ್ವಹಣಾ ತರಬೇತಿ ನೀಡುವ ಮೂಲಕ ಗ್ರಾಹಕರಿಗೆ ತ್ವರಿತ ಸ್ಪಂದನೆ ಮತ್ತು ಮೌಲ್ಯಯುತ ಸೇವೆ ನೀಡಲು ವಿಶೇಷ ಮುತುವರ್ಜಿ ವಹಿಸಲಾಗಿದೆ. ಇದು ವಿಶಾಲ ಸೌಹಾರ್ದ ಸಹಕಾರಿಯ ಯಶಸ್ಸಿನ ಪ್ರಮುಖ ಸೂತ್ರವಾಗಿದೆ. ಹೀಗಾಗಿ ಸಹಕಾರಿಯು ಅತ್ಯಂತ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಠೇವಣಿ ಸಂಗ್ರಹದ ಮೂಲಕ ಗ್ರಾಹಕರ ವಿಶ್ವಾಸಾರ್ಹ ಸಹಕಾರಿಯಾಗಿ ರೂಪುಗೊಂಡಿದೆ.


ಇಂದಿನ ಚಿಕ್ಕ-ಚಿಕ್ಕ ಉಳಿತಾಯವೇ ಭವಿಷ್ಯಕ್ಕೆ ಉಜ್ವಲ ಅಡಿಪಾಯ ಹಾಕಿಕೊಡಬಲ್ಲವು. ಸಹಕಾರಿ ಸಂಘಗಳಲ್ಲಿ ಸಕ್ರೀಯ ಭಾಗವಹಿಸುವಿಕೆಯು ವ್ಯಕ್ತಿ-ವ್ಯಕ್ತಿಯನ್ನು ಆರ್ಥಿಕ ಶಕ್ತಿಯಾಗಿಸುವ ಜೊತೆಗೆ ಸಮಾಜದ ಸುಸ್ಥಿರ ಆರ್ಥಿಕ ಅಭಿವೃದ್ದಿಗೆ ಮುನ್ನುಡಿ ಬರೆಯುತ್ತದೆ. ನಮ್ಮ ಉಳಿತಾಯದ ಹೂಡಿಕೆಯು ನಮಗೆ ಭವಿಷ್ಯಕ್ಕೆ ಭದ್ರತೆ ಹಾಗೂ ಲಾಭ ತಂದು ಕೊಡುವ ಜೊತೆಗೆ, ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಹಾಗೂ ಸಮಾಜದ ಬಲವರ್ಧನೆಗೆ ಹೊಸ ಉದ್ಯಮ, ಉದ್ಯೋಗ ಸೃಜನೆಗೆ ಅನುಕೂಲ ಮಾಡಿಕೊಡುತ್ತದೆ. ನಮ್ಮ ಹಳ್ಳಿಗಳಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳು ಕಳೆದ 20-30 ವರ್ಷಗಳ ಅವಧಿಯಲ್ಲಿ ಗ್ರಾಮೀಣ ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿವೆ. ಇದರಿಂದ ಅನೇಕ ಹಳ್ಳಿಗಳು ಆರ್ಥಿಕವಾಗಿ ಬಲಾಢ್ಯವಾದ ಹಲವಾರು ನಿದರ್ಶನಗಳು ನಮ್ಮ ಕಣ್ಣು ಮುಂದಿವೆ. ಕೃಷಿ ಪತ್ತಿನ ಸಂಘಗಳು, ಸೌಹಾರ್ದ ಸಹಕಾರಿಗಳು, ಹಾಲು ಉತ್ಪಾದಕರ ಸಂಘಗಳು, ಕೃಷಿ ಉತ್ಪನ ಹಾಗೂ ಮಾರುಕಟ್ಟೆ ಸಂಘಗಳು, ರೈತ ಸೇವಾ ಕೇಂದ್ರಗಳು, ಪರಿಸರ ಸಂರಕ್ಷಣೆ ಸಂಘಗಳು, ನೀರು ಬಳಕೆದಾರರ ಸಂಘಗಳು, ಧಾರ್ಮಿಕ ದತ್ತಿ ಸಂಸ್ಥೆಗಳು, ಸರ್ಕಾರೇತರ ಸಂಘಗಳು ( ಎನ್.ಜಿ.ಒ)  ಇವೆಲ್ಲವೂ ಸಹಕಾರ ತತ್ವದ ಮೂಲಶಕ್ತಿಯ ಪ್ರತಿಬಿಂಬಗಳಾಗಿದೆ.


ಸದಸ್ಯರ ಆರ್ಥಿಕ ಬಲವರ್ಧನೆಯ ಜೊತೆಗೆ ಸಮಾಜ ಮತ್ತು ಸಂಸ್ಕೃತಿಯ ಪುನರುತ್ಥಾನದ ಕೆಲಸವನ್ನು ವಿಶಾಲ್ ಸಹಕಾರಿ ಹಾಗೂ ಎಂ.ಆರ್.ಎನ್. ಪರಿವಾರ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದೆ. “ನದಿ ವಿಶ್ವಸ್ಯಃ ಮಾತರಂ” ಎಂದರೆ ಭೂಮಿ, ಗೋಮಾತೆಯಂತೆ ನದಿ ಕೂಡ ವಿಶ್ವಕ್ಕೆ ತಾಯಿ ಸ್ವರೂಪವಾಗಿದೆ. ಮನುಷ್ಯ ಜೀವನದ ನಾಗರಿಕತೆಯ ವಿಕಾಸವೇ ನದಿ ತೀರಗಳಲ್ಲಿ ಆಗಿದೆ. ನಮಗೆ ಜೀವಜಲದ ಜೊತೆಗೆ ಇಡೀ ಜೀವನವನ್ನು ಕಟ್ಟಿಕೊಟ್ಟ ನದಿಗಳನ್ನು ಭಾರತೀಯ ಸಂಸ್ಕೃತಿಯು ತೀರ್ಥರೂಪದಲ್ಲಿ ನೋಡುತ್ತದೆ. ಪ್ರತಿ ನದಿಗೂ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿನ್ನೆಲೆ ಇದೆ. ಹೀಗಾಗಿ ಸಪ್ತ ಜಾಹ್ನವಿಗಳ ಆದಿಯಾಗಿ ಎಲ್ಲ ನದಿಗಳು ನಮಗೆ ಭಗವತಿ ಸ್ವರೂಪವಾಗಿವೆ. ಭಾರತದ ಅಂತರಾತ್ಮವೇ ಗಂಗೆಯಾಗಿದ್ದಾಳೆ. ಹಾಗೆಯೇ ವಿಶೇಷವಾಗಿ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳು ಸೇರಿದಂತೆ ಇಡೀ ಉತ್ತರ ಕರ್ನಾಟಕಕ್ಕೆ ಜೀವನಾಧಾರವಾದ ಕೃಷ್ಣೆ ನಮ್ಮ ಭಾವ ಗಂಗೆಯಾಗಿದ್ದಾಳೆ. ಕೃಷ್ಣೆಯ ಸಾಂಸ್ಕೃತಿಕ ಶ್ರೀಮಂತಿಕೆಯ ಶ್ರೇಷ್ಠತೆಯನ್ನು ನಮ್ಮ ಜನರಲ್ಲಿ ಪುನರ್ ಜಾಗೃತಗೊಳಿಸುವ ಜೊತೆಗೆ ಕೃಷ್ಣೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಶ್ರೀಮಂತಿಕೆಯ ಪುನರುತ್ಥಾನದ ಕಾರ್ಯವನ್ನು ನಿರಾಣಿ ಸಮೂಹ ದೈವ ಕಾರ್ಯದಂತೆ ಮಾಡುತ್ತಿದೆ. ಇದಕ್ಕೆ ಜನರ ಸ್ಪಂದನೆ ಅತ್ಯುತ್ತಮವಾಗಿದೆ. ಅದರೊಡನೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವ ಹೋರಾಟಕ್ಕೆ ನಮ್ಮ ಪೂರ್ಣ ಬೆಂಬಲವಿದೆ. 


ಕೃಷ್ಣೆಯ ಜೊತೆಗೆ ನಮ್ಮ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಎರಡು ಕಣ್ಣುಗಳಂತಿರುವ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಬಲವರ್ಧನೆಯಾದರೆ ನಮ್ಮ ರೈತನಿಗೆ 12 ತಿಂಗಳು ನಿರಂತರ ನೀರಾವರಿ ದೊರಕುತ್ತದೆ. ನಮ್ಮ ರೈತ ಆರ್ಥಿಕವಾಗಿ ಬಲಾಢ್ಯನಾಗುತ್ತಾನೆ. ರೈತ ಆರ್ಥಿಕವಾಗಿ ಶಕ್ತಿವಂತನಾದರೆ ನಮ್ಮ ಹಳ್ಳಿಗಳು ಹಾಗೂ ಸಹಕಾರಿ ಸಂಘಗಳಿಗೆ ಆರ್ಥಿಕವಾಗಿ ಆನೆಬಲ ಬರುತ್ತದೆ. ಈ ನಿಟ್ಟಿನಲ್ಲಿ ಅಮೃತಧಾರೆ ಕಾಳಿ-ಘಟಪ್ರಭಾ- ಮಲಪ್ರಭಾ ನದಿ ಜೋಡಣೆ ಯೋಜನೆ, ಬಸವಧಾರೆ ಕೃಷ್ಣಾ ಘಟಪ್ರಭಾ ಹಾಗೂ ಮಲಪ್ರಭಾ ನದಿ ಜೋಡಣೆ ಯೋಜನೆ ಮತ್ತು ವಿಜಯಧಾರೆ ಮೂಲಕ ಹಿರಣ್ಯಕೇಶಿ ನದಿಯ ಪ್ರವಾಹದ ನೀರನ್ನು ಹಿಡಕಲ್ ಜಲಾಶಯಕ್ಕೆ ತುಂಬಿಸುವ ಈ ಮೂರು ಯೋಜನೆಗಳು ಉತ್ತರ ಕರ್ನಾಟಕದ 5 ಜಿಲ್ಲೆಗಳ ಬದುಕನ್ನು ಬದಲಿಸುವ ಶಕ್ತಿ ಹೊಂದಿವೆ. ಹೀಗಾಗಿ ಇವುಗಳ ಅನುಷ್ಠಾನದ ಹೋರಾಟವೇ ನಮ್ಮ ರಣಮಂತ್ರವಾಗಿದೆ.


ಸಹಕಾರಿ ಸಂಘಗಳು ಹಣಕಾಸಿನ ವ್ಯವಹಾರಗಳ ಜೊತೆಗೆ ಮೌಲ್ಯ, ಸಂಸ್ಕೃತಿ, ಪರಂಪರೆಯ ಪುನರುಜ್ಜೀವನದ ಕಾರ್ಯ ಹಾಗೂ ಪ್ರದೇಶ ಅಭಿವೃದ್ದಿಯ ಕೈಂಕರ್ಯದಲ್ಲಿ ಭಾಗಿಯಾಗಬೇಕು. ಆರ್ಥಿಕ ಅಭಿವೃದ್ದಿಗೆ ಕೃಷಿ, ಉದ್ಯಮ, ಶಿಕ್ಷಣ, ಆರೋಗ್ಯ ಹಾಗೂ ಅತ್ಯುತ್ತಮ ಕೌಟುಂಬಿಕ ವ್ಯವಸ್ಥೆಗಳೇ ಮೂಲ ಬೇರುಗಳಾಗಿವೆ. ಇದನ್ನು ಅರಿತು ಎಲ್ಲರೂ ಸ್ನೇಹ ಮತ್ತು ಸೌಹಾರ್ದತೆಯಿಂದ ದುಡಿದರೆ ಸಹಕಾರ ತತ್ವ ಗೆಲ್ಲುತ್ತದೆ. ನಮ್ಮ ನಾಡು ಪ್ರಕಾಶಿಸುತ್ತದೆ. ಹೀಗಾಗಿ ಎಲ್ಲರೂ ಸೇರಿ ದುಡಿಯೋಣ, ಎಲ್ಲರೂ ಸೇರಿ ಬೆಳೆಯೋಣ, ವಿಕಸಿತ ಭಾರತ ಕಟ್ಟೋಣ.


ಜೈ ಸಹಕಾರ.


ಸಂಗಮೇಶ ಆರ್. ನಿರಾಣಿ.
ಅಧ್ಯಕ್ಷರು,

ವಿಶಾಲ (ಎಂ.ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ., ಜಮಖಂಡಿ.

bottom of page